ಪಂಚಾಕ್ಷರ -
ಇದು ದಂಡಕಾರಣ್ಯದಲ್ಲಿ ಒಂದು ಸರೋವರ. ಶ್ರೀರಾಮಚಂದ್ರನೊಮ್ಮೆ ಅಗಸ್ತ್ಯ ಮಹರ್ಷಿಗಳೊಡನೆ ವಿಮಾನವನ್ನೇರಿ ವಿಹರಿಸುವಾಗ ಇದರ ಬಳಿ ಒಂದು ಇರುಳು ಕಳೆದ. ಆಗ ಈ ಕುರಿತ ಒಂದು ವಿಶೇಷ ವೃತ್ತಾಂತ ಅಗಸ್ತ್ಯ ಮಹರ್ಷಿಗಳಿಂದ ಶ್ರೀರಾಮನಿಗೆ ತಿಳಿದು ಬಂದಿತು. ಹಿಂದೊಮ್ಮೆ ಜಲಕ್ರೀಡೆಗಾಗಿ ಅಲ್ಲಿಗೆ ಬಂದಿದ್ದ ಗಂಧರ್ವರಾಜನ ಐವರು ಮಂತ್ರಿಯರು ಮತ್ತು ನಾಗರಾಜನ ಏಳು ಜನರು ಕುಮಾರಿಯರು, ಅಲ್ಲಿ ತಪೋಮಗ್ನನಾಗಿದ್ದ ಋಷಿಯೊಬ್ಬನ ತಪಸ್ಸಿಗೆ ವಿಘ್ನವನ್ನೊಡ್ಡಿದರು. ಅದರಿಂದ ಕುಪಿತನಾದ ಋಷಿ ಅವರೆಲ್ಲರನ್ನೂ ಆ ಜಲ ದೇವತೆಯ ವಶಕ್ಕೆ ಒಪ್ಪಿಸಿ ನಿರ್ಬಂಧದಲ್ಲಿರಿಸುವಂತೆ ಮಾಡಿದ. ಕಾಲಾಂತರದಲ್ಲಿ ಆ ಋಷಿ ಕೊನೆಯುಸಿರೆಳೆದರೂ ಆ ಕನ್ಯೆಯರು ಮಾತ್ರ ಬಂಧನದಲ್ಲಿಯೆ ಕೊಳೆಯುತ್ತ ಉಳಿದರು.

ಈ ವೃತ್ತಾಂತವನ್ನು ಕೇಳಿ ಶ್ರೀರಾಮನ ಎದೆ ಕರಗಿತು. ತಕ್ಷಣವೆ ಆತ ಅವರೆಲ್ಲರನ್ನೂ ಆ ಜಲದೇವತೆಯ ಹಿಡಿತದಿಂದ ಬಿಡಿಸಿ ಬಂಧಮುಕ್ತರನ್ನಾಗಿ ಮಾಡಿದ. ಕನ್ಯಾಪಿತೃಗಳಾದ ಗಂಧರ್ವರಾಜ ನಾಗರಾಜರಿಬ್ಬರೂ ಈ ಅಪೂರ್ವ ಸಂತೋಷದ ಸಮಾಚಾರದಿಂದ ಆನಂದತುಂದಿಲರಾಗಿ ಅಲ್ಲಿಗೆ ಧಾವಿಸಿ, ತಮ್ಮ ಕೃತಜ್ಞತೆಯನ್ನು ಅರ್ಪಿಸಿ, ತಮ್ಮ ಕನ್ಯೆಯರನ್ನು ಸೊಸೆಯಂದಿರನ್ನಾಗಿ ಸ್ವೀಕರಿಸಬೇಕೆಂದು ಶ್ರೀರಾಮಚಂದ್ರನಲ್ಲಿ ಪ್ರಾರ್ಥಿಸಿಕೊಂಡರು. ಶ್ರೀರಾಮನೂ ಅದಕ್ಕೆ ಸಂತೋಷದಿಂದ ಸಮ್ಮತಿಸಿ ಅಗಸ್ತ್ಯ ಮಹರ್ಷಿಗಳ ಸಲಹೆಯ ಮೇರೆಗೆ, ನಾಗಕನ್ಯೆಯರಾದ ಕಂಜಾನನೆ, ಮಾಲತಿಯರನ್ನು ಅನುಕ್ರಮವಾಗಿ ತನ್ನ ಮಗ ಲವ ಮತ್ತು ಶತ್ರುಘ್ನನ ಪುತ್ರ ಯೂಪಕೇತು (ಶತ್ರ್ರುಘಾತಿ ?) ಎಂಬವರಿಗೂ ಉಳಿದ ಹತ್ತು ಜನ ಕನ್ನೆಯರನ್ನು ಇಬ್ಬಿಬ್ಬರಂತೆ ತನ್ನ ತಮ್ಮಂದಿರ ಮಕ್ಕಳಾದ ಇನ್ನುಳಿದ ಐವರಿಗೂ ವಧುಗಳಾಗಿ ಸ್ವೀಕರಿಸಿ ಮದುವೆ ಮಾಡಿದ. ಇದಕ್ಕನುಗುಣವಾಗಿ ಲಕ್ಷ್ಮಣಕುಮಾರರಾದ ಅಂಗದ, ಚಿತ್ರಕೇತುಗಳು, ಭರತಪುತ್ರರಾದ ಪುಷ್ಕರ, ತಕ್ಷರು ಶತ್ರುಘ್ನನ ಸುಕುಮಾರ ಸುಬಾಹು-ಅನುಕ್ರಮವಾಗಿ ಚಂದ್ರಿಕೆ ಚಂದ್ರಾಸ್ಯೆ ಚಂಚಲೆ ಚಲಪೆ ಅಚಲೆ ಎಂಬ ಗಂಧರ್ವ ಕನ್ಯೆಯರನ್ನೂ ಕಂಜಾಕ್ಷಿ ಕಂಜಾಘ್ರಿ ಕಲಾವತಿ ಕಲಿಕೆ ಕಮಲೆಯರೆಂಬ ನಾಗಕನ್ನೆಯರನ್ನೂ ಲಗ್ನವಾದರು.		 (ಎಂ.ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ